ಬೆಳ್ತಂಗಡಿ: ತಮ್ಮ ಪತ್ನಿಯರ ಚಿನ್ನಾಭರಣಗಳನ್ನೇ ಮದುಮಗಳಿಗೆ ನೀಡಿ ನಿಂತು ಹೋಗಲಿದ್ದ ಮದುವೆಗೆ ನೆರವಾದ ಆಪತ್ಬಾಂಧವರು!

ಬೆಳ್ತಂಗಡಿ: ಬಡ ಮುಸ್ಲಿಂ ಯುವತಿಯೋರ್ವಳ ಮದುವೆ ನಿಶ್ಚಿತಾರ್ಥದ ವೇಳೆ ವರನ ಕಡೆಯವರು ಕೇಳಿದ್ದ ಎಂಟು ಪವನ್ ಚಿನ್ನಾಭರಣವನ್ನು ಮದುವೆಯ ದಿನ ಯುವತಿಯ ಮನೆಯವರಿ೦ದ ವರನಿಗೆ ಕೊಡಲು ಸಾಧ್ಯವಾಗದ ಕಾರಣ ಮದುವೆಯೇ ರದ್ದಾಗುವ ಸಾಧ್ಯತೆ ಇರುವುದನ್ನು ಮನಗಂಡ ಬೆಳ್ತಂಗಡಿಯ ಆಪತ್ಬಾಂಧವ ಸೇವಾದಳದ ಸಂಚಾಲಕರ ಮನವಿಯ ಮೇರೆಗೆ ಕುಪ್ಪಟ್ಟಿಯ ವಿಶಾಲ ಹೃದಯಿ ಆಪತ್ಬಾಂಧವ ಯುವಕರಿಬ್ಬರು ತಮ್ಮ ಪತ್ನಿಯರ ಚಿನ್ನಾಭರಣಗಳನ್ನೇ ಯುವತಿಗೆ ನೀಡಿ ಮದುವೆ ಮಾಡಿಸಿದ ಬಹಳ ಅಪರೂಪದ ಘಟನೆ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಎಂಬಲ್ಲಿ ನಡೆದಿದೆ.
ತಂದೆ ಇಲ್ಲದ ಕಡು ಬಡತನದ ಮುಸ್ಲಿಂ ಯುವತಿಯ ನಿಶ್ಚಯದ ದಿನ ಆ ಯುವತಿಯ ಮನೆಯವರು ವರನಿಗೆ 8 ಪವನ್ ಚಿನ್ನಾಭರಣ ಕೊಡುವುದೆಂದು ತೀರ್ಮಾನವಾಗಿತ್ತು. ಆದರೆ ಕಡು ಬಡವರಾದ ಯುವತಿಯ ಮನೆಯವರು ವರ ಒಳ್ಳೆಯವನೆಂಬ ಕಾರಣಕ್ಕೆ ವರನ ಕಡೆಯವರು ಹೇಳಿದಂತೆ ಎಂಟು ಪವನ್ ಚಿನ್ನಾಭರಣ ಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಮದುವೆ ದಿನ ಹತ್ತಿರ ಬರುತ್ತಿದ್ದರೂ ಯುವತಿಯ ಮನೆಯವರಿಗೆ 8 ಪವನ್ ಚಿನ್ನಾಭರಣ ಕೊಡುವುದು ಬಹಳ ಕಷ್ಟವೆನಿಸಿತು.ಹೀಗಾಗಿ ಮದುವೆಯನ್ನೇ ರದ್ದುಗೊಳಿಸುವಷ್ಟರವರೆಗೆ ಪರಿಸ್ಥಿತಿ ವಿಕೋಪಕ್ಕೇರಿತ್ತು. ಈ ಮಧ್ಯೆ ವಿಚಾರ ತಿಳಿದ ಬೆಳ್ತಂಗಡಿ ಆಪತ್ಬಾಂಧವ ಸೇವಾದಳದ ಸಂಚಾಲಕರಾದ ರಫೀಕ್ ಸವಣಲು ತಾವೇ ಮುತುವರ್ಜಿ ವಹಿಸಿ ವರನ ಕಡೆಯವರನ್ನು ಮತ್ತು ಯುವತಿಯ ಕಡೆಯವರನ್ನು ಪರಸ್ಪರ ಒಪ್ಪಿಸಿ 4 ಪವನ್ ಚಿನ್ನಾಭರಣ ನೀಡುವ ಬಗ್ಗೆ ಒಪ್ಪಿಸಿದ್ದರು. ಆದರೆ ತೀರಾ ಕಡು ಬಡವರಾಗಿದ್ದ ಯುವತಿಯ ಮನೆಯವರಿಗೆ ಮದುವೆಯ ಮೊದಲನೇ ದಿನದವರೆಗೂ ಕನಿಷ್ಠ ನಾಲ್ಕು ಪವನ್ ಚಿನ್ನಾಭರಣವನ್ನೂ ಕೂಡಿಸುವುದು ಸಹ ಕಷ್ಟವಾಯಿತು. ಆಗ ಯುವತಿಯ ಮನೆಯವರು ಮತ್ತೆ ಬೆಳ್ತಂಗಡಿಯ ಆಪತ್ಬಾಂಧವ ಸೇವಾದಳದ ಸಂಚಾಲಕರಾದ ರಫೀಕ್ ಸವಣಾಲುರವರಲ್ಲಿ ತಮ್ಮ ಸಂಕಷ್ಟವನ್ನು ಮತ್ತೆ ನಿವೇದಿಸಿಕೊಂಡರು. ಈ ವೇಳೆ ಆಪತ್ಬಾಂಧವ ಸೇವಾದಳದ ಸಂಚಾಲಕ ರಫೀಕ್ ಸವಣಾ ಲು ಸೇವಾದಳದ ಪ್ರಮುಖರಾದ ಕುಪ್ಪೆಟ್ಟಿಯ ಉಸ್ಮಾನ್ ಮುಸ್ಲಿಯಾರ್ ರ ಮಗ ಅಶ್ಫಾನ್ ಮತ್ತು ಕುಪ್ಪೆಟ್ಟಿಯ ಮೊಹಮ್ಮದ್ ಎಂಬವರ ಮಗ ಝೈನುದ್ದೀನ್ ಎಂಬ ಯುವಕರಿಬ್ಬರಲ್ಲಿ ಯುವತಿಗಾದ ಸಂಕಷ್ಟವನ್ನು ತಿಳಿಸಿ ತಕ್ಷಣ ಕಷ್ಟಕ್ಕೆ ಸ್ಪಂದಿಸುವಂತೆ ವಿನಂತಿಸಿಕೊಂಡಿದ್ದರು. ಈ ವೇಳೆ ಯುವತಿಯ ಕಷ್ಟಕ್ಕೆ ಸ್ಪಂದಿಸಿದ ಆ ವಿಶಾಲ ಹೃದಯಿಗಳಾದ ಯುವಕರಿಬ್ಬರು ತಮ್ಮ ಪತ್ನಿಯರಿಗೆ ಖರೀದಿಸಿದ್ದ ತಲಾ ಎರಡೆರಡು ಪವನ್ ಚಿನ್ನಾಭರಣಗಳನ್ನು ಆ ಯುವತಿಗೆ ನೀಡಿ ರದ್ದಾಗಬಹುದಾಗಿದ್ದ ಮದುವೆ, ಯಾವುದೇ ಅಡೆತಡೆ ಇಲ್ಲದೆ ನೆರವೇರುವಂತೆ ಮಾಡಿ ನಿಜವಾದ ಆಪತ್ಬಾಂಧವರು ಎನಿಸಿಕೊಂಡಿದ್ದಾರೆ.
ಕಷ್ಟಕಾಲದಲ್ಲಿ ಆಪತ್ಬಾಂಧವರಾಗಿ ಸಹಾಯಕ್ಕೆ ಬಂದು ಮಾನವೀಯತೆ ಮೆರೆದ ಕುಪ್ಪೆಟ್ಟಿಯ ಯುವಕರಿಬ್ಬರ ಈ ಹೃದಯ ವೈಶಾಲ್ಯದ ನೆರವಿನ ಕಾರ್ಯ ಇದೀಗ ಇಡೀ ನಾಡಿನಾದ್ಯಂತ ಶ್ಲಾಘನೆಗೆ ಪಾತ್ರವಾಗಿದ್ದು ಬೆಳ್ತಂಗಡಿಯ ಆಪತ್ಬಾಂಧವ ಸೇವಾದಳ ಕೂಡ ಈ ಆಪತ್ಬಾಂಧವ ಯುವಕರಿಬ್ಬರ ಸೇವೆಗೆ ಕೃತಜ್ಞತೆ ಸಲ್ಲಿಸಿದೆ.

Share this article!

Leave A Comment